ಬೋಧನಾ ಗುಣಮಟ್ಟದ ಆಧುನೀಕರಣ: ಶಿಕ್ಷಕರ ತರಬೇತಿ ಮತ್ತು ಜವಾಬ್ದಾರಿ

ಯಾವುದೇ ಒಂದು ಶೈಕ್ಷಣಿಕ ವ್ಯವಸ್ಥೆಯ ನಿಜವಾದ ಯಶಸ್ಸು ಅಲ್ಲಿನ ಭೌತಿಕ ಮೂಲಸೌಕರ್ಯಗಳಿಗಿಂತ ಹೆಚ್ಚಾಗಿ, ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರ ಬದ್ಧತೆ, ಜ್ಞಾನ ಮತ್ತು ಬೋಧನಾ ಕೌಶಲ್ಯದ ಮೇಲೆ ನಿರ್ಧಾರಿತವಾಗಿರುತ್ತದೆ. ಕೇವಲ ಅತ್ಯಾಧುನಿಕ ಶಾಲಾ ಕಟ್ಟಡಗಳನ್ನು ಮತ್ತು ಹೈಟೆಕ್ ತರಗತಿ ಕೋಣೆಗಳನ್ನು ನಿರ್ಮಿಸಿದರೆ ಸಾಲದು; ಅವುಗಳ ಒಳಗೆ ಗುಣಮಟ್ಟದ, ಮೌಲ್ಯಯುತ ಬೋಧನೆ ನಡೆಯಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಶಿಕ್ಷಣ ಇಲಾಖೆಯಲ್ಲಿದ್ದ ಬೋಧಕ ಸಿಬ್ಬಂದಿಯ ತೀವ್ರ ಕೊರತೆಯನ್ನು ನೀಗಿಸಲು ಸಮರೋಪಾದಿಯಲ್ಲಿ ಕ್ರಾಂತಿಕಾರಕ ಕ್ರಮಗಳನ್ನು ಕೈಗೊಂಡಿದೆ.

ಕಳೆದ 2025-26 ನೇ ಶೈಕ್ಷಣಿಕ ವರ್ಷದಲ್ಲಿ ಶಾಲಾ ಶಿಕ್ಷಣ ಇಲಾಖೆಯು ಎದುರಿಸುತ್ತಿದ್ದ ಶಿಕ್ಷಕರ ಕೊರತೆಯ ಸವಾಲನ್ನು ಸರ್ಕಾರ ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಿದೆ. ಪ್ರಾಥಮಿಕ ಶಾಲೆಗಳಲ್ಲಿ 45,179 ಮತ್ತು ಪ್ರೌಢಶಾಲೆಗಳಲ್ಲಿ 13,045 ಶಿಕ್ಷಕರ ಹುದ್ದೆಗಳು ಖಾಲಿಯಿದ್ದವು. ಗ್ರಾಮೀಣ ಮತ್ತು ನಗರ ಭಾಗದ ವಿದ್ಯಾರ್ಥಿಗಳ ದೈನಂದಿನ ಓದಿಗೆ ಹಾಗೂ ಪಠ್ಯಕ್ರಮದ ಪ್ರಗತಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ, ನಾವು ತಕ್ಷಣವೇ 43,526 ಅತಿಥಿ ಶಿಕ್ಷಕರನ್ನುನೇಮಕ ಮಾಡಿಕೊಂಡು ತರಗತಿಗಳು ನಿರಂತರವಾಗಿ ನಡೆಯುವಂತೆ ನೋಡಿಕೊಂಡೆವು. ಇದರ ಮುಂದುವರಿದ ಭಾಗವಾಗಿ, ಪ್ರಸಕ್ತ 2026-27 ನೇ ಸಾಲಿನಲ್ಲಿ ಒಟ್ಟು 15,000 ಕಾಯಂ ಶಿಕ್ಷಕರನ್ನುನೇಮಕ ಮಾಡಿಕೊಳ್ಳಲು ಮಾನ್ಯ ಮುಖ್ಯಮಂತ್ರಿಗಳು ರಾಜ್ಯ ಬಜೆಟ್‌ನಲ್ಲಿ ಐತಿಹಾಸಿಕ ಅನುಮೋದನೆ ನೀಡಿದ್ದಾರೆ.

ಕೇವಲ ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಬೋಧನೆಯ ಗುಣಮಟ್ಟವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ನಿರಂತರ ಶಿಕ್ಷಕರ ತರಬೇತಿ ಕಾರ್ಯಕ್ರಮಗಳನ್ನು (Teacher Training Programs) ಹಮ್ಮಿಕೊಳ್ಳಲಾಗುತ್ತಿದೆ. ಶಾಲೆಗಳಲ್ಲಿ ಕೇವಲ ಸಾಂಪ್ರದಾಯಿಕ ಕಪ್ಪುಹಲಗೆ ಬೋಧನಾ ಪದ್ಧತಿಗೆ ಸೀಮಿತವಾಗದೆ, 21 ನೇ ಶತಮಾನದ ತಾಂತ್ರಿಕ ಅಗತ್ಯಗಳಿಗೆ ತಕ್ಕಂತೆ ಶಿಕ್ಷಕರನ್ನು ಸಜ್ಜುಗೊಳಿಸಲಾಗುತ್ತಿದೆ. ಸ್ಮಾರ್ಟ್ ಕ್ಲಾಸ್‌ರೂಮ್‌ಗಳು ಹಾಗೂ ಕೃತಕ ಬುದ್ಧಿಮತ್ತೆ (AI) ಪರಿಕರಗಳ ಬಳಕೆಯನ್ನು ಪರಿಚಯಿಸಲಾಗುತ್ತಿದೆ. ಜೊತೆಗೆ, ಇಂದಿನ ಆಧುನಿಕ ಯುಗದ ಮಕ್ಕಳ ಮಾನಸಿಕ ಒತ್ತಡಗಳನ್ನು ಅರ್ಥೈಸಿಕೊಂಡು, ಅವರಿಗೆ ಪ್ರೀತಿಯಿಂದ ಬೋಧಿಸುವ ಮನೋವೈಜ್ಞಾನಿಕ ತರಬೇತಿಯನ್ನೂ ಶಿಕ್ಷಕರಿಗೆ ನೀಡಲಾಗುತ್ತಿದೆ.

ಸರ್ಕಾರ ಮತ್ತು ಶಿಕ್ಷಕ ವೃಂದದ ಜಂಟಿ ಶ್ರಮದ ಫಲವಾಗಿ ಪ್ರಸಕ್ತ ಸಾಲಿನಲ್ಲಿ ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ಅತ್ಯುನ್ನತ ಪರೀಕ್ಷಾ ಫಲಿತಾಂಶಗಳು ದಾಖಲಾಗಿದ್ದು, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.94.10 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದು ಕಳೆದ ಸಾಲಿಗಿಂತ ಶೇ.14.06 ರಷ್ಟು ಹೆಚ್ಚು. ದ್ವಿತೀಯ ಪಿಯುಸಿಯಲ್ಲಿ ಶೇ. 86.48 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಕಳೆದ ಸಾಲಿಗಿಂತ ಗಣನೀಯ ಪ್ರಗತಿ ದಾಖಲಾಗಿದೆ.

ಈ ಅಭೂತಪೂರ್ವ ಫಲಿತಾಂಶವು ಕೇವಲ ಆಕಸ್ಮಿಕವಲ್ಲ, ಇದರ ಹಿಂದೆ ಇಲಾಖೆಯ ವ್ಯವಸ್ಥಿತ ಯೋಜನಾ ಅನುಷ್ಠಾನವಿದೆ. ರಾಜ್ಯಾದ್ಯಂತ ನಾವು ಹಮ್ಮಿಕೊಂಡ ನಿಯಮಿತ ಪೋಷಕರು ಮತ್ತು ಶಿಕ್ಷಕರ ಸಭೆಗಳು ಮಕ್ಕಳ ಪ್ರಗತಿಯನ್ನು ಜಂಟಿಯಾಗಿ ಮೇಲ್ವಿಚಾರಣೆ ಮಾಡಲು ನೆರವಾದವು. ಪಠ್ಯಕ್ರಮ ಕೇಂದ್ರಿತ ವಿಶೇಷ ಬೋಧನೆ (Remedial Teaching) ಹಾಗೂ ಅತ್ಯಂತ ಕಟ್ಟುನಿಟ್ಟಾದ ರಾಜ್ಯ ಮಟ್ಟದ ಪೂರ್ವಸಿದ್ಧತಾ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯವನ್ನು ಹೋಗಲಾಡಿಸಿದವು. ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಿಶೇಷ ಶೈಕ್ಷಣಿಕ ಬೆಂಬಲ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ, ಅಲ್ಲಿನ ವಿದ್ಯಾರ್ಥಿಗಳೂ ಸಹ ಮುಖ್ಯವಾಹಿನಿಗೆ ಬರುವಂತೆ ಪ್ರೇರೇಪಿಸಲಾಯಿತು. ಈ ಎಲ್ಲ ಯೋಜನೆಗಳು ಈ ಸಾಲಿನ ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾದವು. ಮುಂದಿನ ವರ್ಷಗಳಲ್ಲಿ ನಮ್ಮ ಇಲಾಖೆಯು ವಿದ್ಯಾರ್ಥಿ ಹಾಗೂ ಶಿಕ್ಷಕರ ಪ್ರಗತಿಗೆ ಮತ್ತಷ್ಟು ಯೋಜನೆಗಳನ್ನು ಪರಿಚಯಿಸಲಿದ್ದು, ಪೋಷಕರಲ್ಲಿ ಸರ್ಕಾರಿ ಶಾಲೆಗಳ ಮೇಲಿನ ಭರವಸೆಯನ್ನು ಗಣನೀಯವಾಗಿ ಹೆಚ್ಚಿಸುವ ವಿಶ್ವಾಸ ಹೊಂದಿದೆ.