ಬೆಳ್ಳಿ ಪರದೆಯಿಂದ ಶಿಕ್ಷಣ ನೀತಿವರೆಗೆ: ಕಥನ ಹೇಳುವ ಕಲೆಯೇ ನನ್ನ ಆಡಳಿತದ ದಾರಿದೀಪ

ಸಿನಿಮಾ ಎನ್ನುವುದು ಕೇವಲ ಮನರಂಜನೆಯ ಸಾಧನವಲ್ಲ. ಅದು ಸಮಾಜದ ಕನ್ನಡಿ. ಒಂದೊಳ್ಳೆ ಸಿನಿಮಾ ಜನರನ್ನು ನಗಿಸುತ್ತದೆ, ಅಳಿಸುತ್ತದೆ, ಯೋಚಿಸುವಂತೆ ಮಾಡುತ್ತದೆ ಮತ್ತು ಕೆಲವೊಮ್ಮೆ ಬದುಕನ್ನೇ ಬದಲಾಯಿಸುತ್ತದೆ. ನಾನು ಚಿತ್ರರಂಗದಲ್ಲಿ ನಿರ್ಮಾಪಕನಾಗಿ ಕೆಲಸ ಮಾಡಿದ ದಿನಗಳಲ್ಲಿ ಕಲಿತ ಅತ್ಯಂತ ದೊಡ್ಡ ಪಾಠ ಇದೇ. ಇಂದು ಕಾಂಗ್ರೆಸ್‌ ಸರ್ಕಾರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವನಾಗಿ ಕೆಲಸ ಮಾಡುವಾಗಲೂ ಆ ಅನುಭವಗಳು ಪ್ರತಿದಿನ ನನ್ನ ನಿರ್ಧಾರಗಳಲ್ಲಿ ಪ್ರತಿಫಲಿಸುತ್ತವೆ. ಬೆಳ್ಳಿ ಪರದೆಯ ಮೇಲೆ ಕಥೆ ಹೇಳುತ್ತಿದ್ದ ನಾನು, ಇಂದು ಶಿಕ್ಷಣದ ಮೂಲಕ ಲಕ್ಷಾಂತರ ಮಕ್ಕಳ ಭವಿಷ್ಯದ ಕಥೆಯನ್ನು ಬರೆಯುವ ಅವಕಾಶ ಪಡೆದಿದ್ದೇನೆ.

ನನ್ನ ಚಿತ್ರರಂಗದ ಪಯಣವು ʼಬೆಳ್ಳಿಯಪ್ಪ ಬಂಗಾರಪ್ಪʼ ಚಿತ್ರದ ನಿರ್ಮಾಣದೊಂದಿಗೆ ಆರಂಭವಾಯಿತು. ನಂತರ ʼಕಲ್ಲರಳಿ ಹೂವಾಗಿʼ ಚಿತ್ರದ ನಿರ್ಮಾಣದಲ್ಲಿಯೂ ಭಾಗಿಯಾಗುವ ಅವಕಾಶ ದೊರೆಯಿತು. ಕಲ್ಲರಳಿ ಹೂವಾಗಿ ರಾಷ್ಟ್ರೀಯ ಏಕತೆಯ ಸಂದೇಶ ಸಾರಿದ ಚಿತ್ರವಾಗಿ ರಾಷ್ಟ್ರಮಟ್ಟದಲ್ಲಿ ಪ್ರಶಂಸೆ ಗಳಿಸಿತು. ಇತಿಹಾಸ, ಸಂಸ್ಕೃತಿ ಮತ್ತು ಮಾನವೀಯತೆಯನ್ನು ಜೋಡಿಸಿ ಕಥೆ ಹೇಳಿದ ಈ ಚಿತ್ರವು, ಸಮಾಜದಲ್ಲಿ ವಿಭಜನೆಗಿಂತ ಮಾನವೀಯತೆ ದೊಡ್ಡದು ಎಂಬ ಸಂದೇಶವನ್ನು ನೀಡಿತು. ಇಂತಹ ಕಥೆಗಳು ಜನರ ಮನಸ್ಸನ್ನು ಮುಟ್ಟುತ್ತವೆ ಎಂಬುದನ್ನು ನಾನು ಅಂದೇ ಭಾವಿಸಿದ್ದೆ.

ಒಬ್ಬ ನಿರ್ಮಾಪಕನಿಗೆ ಕಥೆ ಮಾತ್ರ ಸಾಕಾಗುವುದಿಲ್ಲ. ಪ್ರತಿಯೊಬ್ಬ ಪಾತ್ರದ ಹಿನ್ನೆಲೆ, ಪ್ರತಿಯೊಂದು ದೃಶ್ಯದ ಉದ್ದೇಶ, ಪ್ರತಿಯೊಂದು ಸಂಭಾಷಣೆಯ ಪರಿಣಾಮ ಮತ್ತು ಕೊನೆಯಲ್ಲಿ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವ ಅನುಭವದ ಬಗ್ಗೆ ಯೋಚಿಸಬೇಕಾಗುತ್ತದೆ. ಶಿಕ್ಷಣವೂ ಇದೇ ರೀತಿ. ಶಾಲೆ ಕಟ್ಟುವುದಷ್ಟೇ ಸಾಕಾಗುವುದಿಲ್ಲ. ತರಗತಿಯಲ್ಲಿ ಶಿಕ್ಷಕರಿದ್ದಾರೆಯೇ? ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆಯೇ? ಅವರು ಶಾಲೆಗೆ ಸಂತೋಷದಿಂದ ಬರುತ್ತಿದ್ದಾರೆಯೇ? ಪೋಷಕರಿಗೆ ವಿಶ್ವಾಸ ಮೂಡಿದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವ ರೀತಿಯಲ್ಲಿಯೇ ಶಿಕ್ಷಣ ನೀತಿಗಳನ್ನು ರೂಪಿಸಬೇಕು.

ಕರ್ನಾಟಕದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ. ಈ ಮಕ್ಕಳಲ್ಲಿ ಅನೇಕರು ಗ್ರಾಮೀಣ ಪ್ರದೇಶಗಳಿಂದ, ರೈತ ಕುಟುಂಬಗಳಿಂದ ಮತ್ತು ಆರ್ಥಿಕವಾಗಿ ಹಿಂದುಳಿದವರು. ಶಿಕ್ಷಣ ಎನ್ನುವುದು ಕೇವಲ ಒಬ್ಬ ವಿದ್ಯಾರ್ಥಿಯ ಸಾಧನೆಯಲ್ಲ. ಅದು ಒಂದು ಕುಟುಂಬದ, ಒಂದು ಗ್ರಾಮದ ಮತ್ತು ಅಂತಿಮವಾಗಿ ಒಂದು ರಾಜ್ಯದ ಅಭಿವೃದ್ಧಿಯ ಕಥೆಯಾಗುತ್ತದೆ. ಆದ್ದರಿಂದ ಶಿಕ್ಷಣವನ್ನು ನಾನು ಕೇವಲ ಒಂದು ಇಲಾಖೆಯ ಕೆಲಸವಾಗಿ ನೋಡುವುದಿಲ್ಲ. ಅದು ಸಮಾಜದ ಭವಿಷ್ಯವನ್ನು ರೂಪಿಸುವ ಅತ್ಯಂತ ದೊಡ್ಡ ಜವಾಬ್ದಾರಿಯಾಗಿದೆ.

ಸಿನಿಮಾ ನಿರ್ಮಾಣದಲ್ಲಿ ಮತ್ತೊಂದು ಪ್ರಮುಖ ಅಂಶವೆಂದರೆ, ಒಂದು ತಂಡವಾಗಿ ಕೆಲಸ ಮಾಡುವುದು. ನಿರ್ದೇಶಕ, ಲೇಖಕ, ಕಲಾವಿದರು, ತಂತ್ರಜ್ಞರು, ಸಂಗೀತ ನಿರ್ದೇಶಕರು, ಛಾಯಾಗ್ರಾಹಕರು ಎಲ್ಲರೂ ಒಂದೇ ಗುರಿಯೊಂದಿಗೆ ಕೆಲಸ ಮಾಡಿದಾಗ ಮಾತ್ರ ಉತ್ತಮ ಸಿನಿಮಾ ಮೂಡುತ್ತದೆ. ಶಿಕ್ಷಣ ಇಲಾಖೆಯಲ್ಲಿಯೂ ಇದೇ ತತ್ವವನ್ನು ನಾನು ನಂಬಿದ್ದೇನೆ. ಶಿಕ್ಷಕರು, ಮುಖ್ಯೋಪಾಧ್ಯಾಯರು, ಪೋಷಕರು, ಅಧಿಕಾರಿಗಳು ಮತ್ತು ಸರ್ಕಾರ ಎಲ್ಲರೂ ಒಂದೇ ತಂಡವಾಗಿ ಕೆಲಸ ಮಾಡಿದಾಗ ಮಾತ್ರ ವಿದ್ಯಾರ್ಥಿಗಳ ಭವಿಷ್ಯ ಬೆಳಗುತ್ತದೆ. ಆಡಳಿತದಲ್ಲಿ ಸಂವಾದ, ಸಹಕಾರ ಮತ್ತು ವಿಶ್ವಾಸ ಅತ್ಯಂತ ಮುಖ್ಯವಾದದ್ದು. ಇವುಗಳನ್ನು ಎಂದಿಗೂ ಮರೆಯಬಾರದು.

ಒಳ್ಳೆಯ ಕಥೆಗೆ ನಾಯಕ ಮಾತ್ರ ಸಾಕಾಗುವುದಿಲ್ಲ. ಪ್ರತಿಯೊಂದು ಪಾತ್ರಕ್ಕೂ ತನ್ನದೇ ಆದ ಮಹತ್ವ ಇರುತ್ತದೆ. ಅದೇ ರೀತಿ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಮುಖ್ಯ. ನಗರದಲ್ಲಿ ಓದುತ್ತಿರುವ ವಿದ್ಯಾರ್ಥಿಗೂ, ದೂರದ ಹಳ್ಳಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗೂ ಸಮಾನ ಅವಕಾಶ ದೊರೆಯಬೇಕು. ನಾಡಿನ ಅನೇಕ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಡಗಿಕೊಂಡಿದೆ. ಆದರೆ ಅವಕಾಶಗಳು ಸಿಗದೆ, ವಂಚಿತರಾಗುತ್ತಾರೆ. ಅಂತಹ ಅದ್ಭುತ ಅವಕಾಶಗಳನ್ನು ತಲುಪಿಸುವುದು ಸರ್ಕಾರದ ಕರ್ತವ್ಯ.

ನನ್ನ ತಂದೆ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ರಾಜಕೀಯವನ್ನು ಜನಸೇವೆಯಾಗಿ ನೋಡುತ್ತಿದ್ದರು. ಜನರ ಬದುಕಿನಲ್ಲಿ ಬದಲಾವಣೆ ತರುವ ನಿರ್ಧಾರಗಳೇ ನಿಜವಾದ ರಾಜಕೀಯ ಎಂದು ಅವರು ನಂಬಿದ್ದರು. ಚಿತ್ರರಂಗದಲ್ಲಿ ಕಲಿತ ಕಥೆ ಹೇಳುವ ಕಲೆ ಮತ್ತು ಕುಟುಂಬದಿಂದ ಬಂದ ಜನಪರ ಮೌಲ್ಯಗಳು ನನ್ನ ಸಾರ್ವಜನಿಕ ಜೀವನಕ್ಕೆ ಬಲವಾದ ಅಡಿಪಾಯವಾಗಿವೆ.

ಇಂದು ನಾನು ತೆಗೆದುಕೊಳ್ಳುವ ಪ್ರತಿಯೊಂದು ಶಿಕ್ಷಣ ಸಂಬಂಧಿತ ನಿರ್ಧಾರದ ಹಿಂದೆ ಸದಾ ಒಂದು ಪ್ರಶ್ನೆ ಕಾಡುತ್ತದೆ. "ಈ ನಿರ್ಧಾರದಿಂದ ಒಂದು ಮಗುವಿನ ಬದುಕಿನಲ್ಲಿ ಒಳ್ಳೆಯ ಬದಲಾವಣೆ ಆಗುತ್ತದೆಯೇ?" ಉತ್ತರ ಹೌದು ಎಂದಾದರೆ ಆ ದಾರಿಯಲ್ಲೇ ಮುಂದುವರಿಯಬೇಕು ಎಂಬ ನಂಬಿಕೆ ನನ್ನದು. ಏಕೆಂದರೆ ಒಂದು ಉತ್ತಮ ಸಿನಿಮಾದ ವೀಕ್ಷಣೆ ಕೆಲವೇ ಗಂಟೆಗಳ ಕಾಲ ನಮ್ಮ ಮನಸ್ಸಿನಲ್ಲಿ ಉಳಿಯಬಹುದು. ಆದರೆ ಒಂದು ಉತ್ತಮ ಶಿಕ್ಷಣ ಜೀವನಪೂರ್ತಿ ವ್ಯಕ್ತಿಯ ಜೊತೆ ಇರುತ್ತದೆ.

ಆದ್ದರಿಂದ ನನ್ನ ಈ ಪಯಣವನ್ನು ನಾನು ಎರಡು ವಿಭಿನ್ನ ಅಧ್ಯಾಯಗಳಾಗಿ ನೋಡುವುದಿಲ್ಲ. ಚಿತ್ರರಂಗ ಮತ್ತು ಸಾರ್ವಜನಿಕ ಜೀವನ ಎರಡರಲ್ಲಿಯೂ ನನ್ನ ಗುರಿ ಒಂದೇ. ಜನರ ಬದುಕನ್ನು ಸ್ಪರ್ಶಿಸುವ ಅರ್ಥಪೂರ್ಣ ಕಥೆಗಳನ್ನು ಸೃಷ್ಟಿಸುವುದು. ಇಂದು ಆ ಕಥೆಯ ಹೆಸರೇ "ಗುಣಮಟ್ಟದ ಶಿಕ್ಷಣ". ಅದರ ಹೀರೋಗಳು ನಮ್ಮ ನಾಡಿನ ಮಕ್ಕಳು. ಅವರ ಯಶಸ್ಸಿನಲ್ಲಿ ಅಡಗಿದೆ ಕರ್ನಾಟಕದ ನಿಜವಾದ ಭವಿಷ್ಯ.