ಆ್ಯಪ್‌ಗಳು ಬರಿ ಕಣ್ಗಾವಲಲ್ಲ, ಆಡಳಿತದ ಪಾರದರ್ಶಕತೆ: ಶಿಕ್ಷಣ ಇಲಾಖೆಯ ಡಿಜಿಟಲ್ ಹೆಜ್ಜೆ

ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಒಂದು ಪ್ರಶ್ನೆ ಆಗಾಗ ಕೇಳಿಬರುತ್ತಿದೆ. ಶಾಲೆಗಳಲ್ಲಿ ಡಿಜಿಟಲ್ ವ್ಯವಸ್ಥೆಗಳು ಮತ್ತು ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ವ್ಯವಸ್ಥೆಗಳು ಜವಾಬ್ದಾರಿತನವನ್ನು ಹೆಚ್ಚಿಸುತ್ತವೆಯೇ? ಅಥವಾ ಅವು ಅತಿಯಾದ ಮೇಲ್ವಿಚಾರಣೆಯ ಪ್ರಶ್ನೆಯನ್ನು ಹುಟ್ಟುಹಾಕುತ್ತದೆಯೇ? ಈ ಪ್ರಶ್ನೆ ಕೇಳುವವರಿಗೆ ನನ್ನ ಮೊದಲ ಉತ್ತರ, ಇದು ಕೇವಲ ತಾಂತ್ರಿಕ ಪ್ರಶ್ನೆಯಲ್ಲ. ಇದು ಆಡಳಿತ, ನೈತಿಕತೆ, ವಿಶ್ವಾಸ ಮತ್ತು ಸಾರ್ವಜನಿಕ ಸೇವೆಯ ಗುಣಮಟ್ಟಕ್ಕೆ ಸಂಬಂಧಿಸಿದ ಚರ್ಚೆ - ಅನ್ನುವುದು.

ಕರ್ನಾಟಕದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ನಿರಂತರ ಮತ್ತು ಕರ್ತವ್ಯ ಆ್ಯಪ್‌ಗಳಂತಹ ಡಿಜಿಟಲ್ ಉಪಕ್ರಮಗಳನ್ನು ಪರಿಚಯಿಸಿರುವ ಉದ್ದೇಶ, ಯಾರ ಮೇಲೂ ಅನುಮಾನ ವ್ಯಕ್ತಪಡಿಸುವುದಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಶಾಲೆಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವುದು ಮತ್ತು ಮಕ್ಕಳಿಗೆ ನಿರಂತರವಾಗಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳುವುದೇ ಇದರ ಮೂಲ ಉದ್ದೇಶವಾಗಿದೆ. ಯಾವುದೇ ವ್ಯವಸ್ಥೆಯ ಯಶಸ್ಸು ಅದರ ಉದ್ದೇಶದಲ್ಲಷ್ಟೇ ಅಲ್ಲ, ಅದನ್ನು ಹೇಗೆ ಅನುಷ್ಠಾನಗೊಳಿಸಲಾಗುತ್ತದೆ ಎಂಬುದರ ಮೇಲೂ ಅವಲಂಬಿತವಾಗಿರುತ್ತದೆ.

ಒಂದು ಸರ್ಕಾರಿ ಶಾಲೆಯ ತರಗತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ಕಾಯುತ್ತಿರುವಾಗ, ಶಿಕ್ಷಕರು ಬೇರೆ ಕೆಲಸದಲ್ಲಿ ನಿರತರಾಗಿದ್ದರೆ ಅಥವಾ ಶಾಲೆಯಲ್ಲೇ ಇಲ್ಲದಿದ್ದರೆ ಅದರ ನೇರ ಪರಿಣಾಮ ಮಕ್ಕಳ ಕಲಿಕೆಯ ಮೇಲೆ ಬೀಳುತ್ತದೆ. ಶಿಕ್ಷಣದಲ್ಲಿ ಕಳೆದುಹೋದ ಒಂದು ದಿನವನ್ನು ಮತ್ತೆ ಸಂಪೂರ್ಣವಾಗಿ ಮರಳಿ ತರುವುದು ಸಾಧ್ಯವಿಲ್ಲ. ಆದ್ದರಿಂದ ಹಾಜರಾತಿಯಂತಹ ಮೂಲಭೂತ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ದಾಖಲಿಸುವುದು ಆಡಳಿತದ ದೃಷ್ಟಿಯಿಂದ ಅಗತ್ಯವಾಗುತ್ತದೆ.

ಹಿಂದಿನ ದಿನಗಳಲ್ಲಿ ಹಾಜರಾತಿ ನೋಂದಣಿ ಸಂಪೂರ್ಣವಾಗಿ ಕೈಬರಹದ ಮೇಲೆ ಅವಲಂಬಿತವಾಗಿತ್ತು. ಮಾಹಿತಿ ಸಂಗ್ರಹಿಸಲು ಸಮಯ ಬೇಕಾಗುತ್ತಿತ್ತು. ಪರಿಶೀಲನೆ ನಡೆಸಲು ಹೆಚ್ಚಿನ ಮಾನವ ಸಂಪನ್ಮೂಲ ಬೇಕಾಗುತ್ತಿತ್ತು. ಕೆಲವೊಮ್ಮೆ ದಾಖಲೆಗಳು ಮತ್ತು ವಾಸ್ತವ ಪರಿಸ್ಥಿತಿಯ ನಡುವೆ ವ್ಯತ್ಯಾಸವೂ ಕಾಣಿಸಿಕೊಳ್ಳುತ್ತಿತ್ತು. ಡಿಜಿಟಲ್ ವ್ಯವಸ್ಥೆಗಳು ಈ ಸಮಸ್ಯೆಗಳನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ. ಶಾಲೆಯಲ್ಲಿ ಯಾರು ಇದ್ದಾರೆ, ಯಾರು ಇಲ್ಲ, ಯಾವ ಶಾಲೆಗೆ ಹೆಚ್ಚುವರಿ ಬೆಂಬಲ ಬೇಕು ಎಂಬ ಮಾಹಿತಿ ಆಡಳಿತ ವಿಭಾಗಕ್ಕೆ ವೇಗವಾಗಿ ದೊರೆಯುತ್ತದೆ. ಇದರಿಂದ ನಿರ್ಧಾರಗಳನ್ನು ಕೂಡ ವೇಗವಾಗಿ ತೆಗೆದುಕೊಳ್ಳಬಹುದು.

ಆದರೆ ಮತ್ತೊಂದು ಪ್ರಶ್ನೆಯೂ ಅಷ್ಟೇ ಮಹತ್ವದ್ದು. ತಂತ್ರಜ್ಞಾನವು ವಿಶ್ವಾಸವನ್ನು ಬದಲಾಯಿಸಬಹುದೇ? ನನ್ನ ಉತ್ತರ ಸ್ಪಷ್ಟವಾಗಿದೆ, ಇಲ್ಲ. ಯಾವುದೇ ಆ್ಯಪ್ ಒಬ್ಬ ಉತ್ತಮ ಶಿಕ್ಷಕರ ಬದ್ಧತೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅದು ಕೇವಲ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡಬಹುದು. ಶಿಕ್ಷಣದ ಹೃದಯ ಎಂದಿಗೂ ಶಿಕ್ಷಕರೇ. ತಂತ್ರಜ್ಞಾನವು ಅವರಿಗೆ ನೆರವಾಗುವ ಸಾಧನವಾಗಿರಬೇಕು, ಅವರ ಮೇಲೆ ಭಾರವಾಗುವ ವ್ಯವಸ್ಥೆಯಾಗಬಾರದು ಅನ್ನುವುದು ನನ್ನ ಕಾಳಜಿ ಕೂಡ.

ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿಯ ಕುರಿತು ಕೆಲವರು ಗೌಪ್ಯತೆ ಮತ್ತು ಮೇಲ್ವಿಚಾರಣೆ ಮಾಡುವಂತಹ ಪ್ರಶ್ನೆಗಳು ಸೃಷ್ಟಿಯಾಗುತ್ತವೆ. ಆದರೆ ಈ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯ. ಯಾವುದೇ ತಂತ್ರಜ್ಞಾನವನ್ನು ಬಳಸುವಾಗ ವೈಯಕ್ತಿಕ ಮಾಹಿತಿಯ ಸುರಕ್ಷತೆ, ಡೇಟಾದ ಸಂರಕ್ಷಣೆ, ಅದರ ಬಳಕೆಯ ಮಿತಿಗಳು ಮತ್ತು ಕಾನೂನುಬದ್ಧತೆ ಸ್ಪಷ್ಟವಾಗಿರಬೇಕು. ಶಿಕ್ಷಣ ಇಲಾಖೆಯ ಜವಾಬ್ದಾರಿ ಕೇವಲ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಲ್ಲ, ಅದನ್ನು ಜವಾಬ್ದಾರಿಯುತವಾಗಿ ಬಳಸುವುದೂ ಆಗಿದೆ.

ಇನ್ನೊಂದು ಮಹತ್ವದ ಅಂಶವೆಂದರೆ, ಜವಾಬ್ದಾರಿತನವು ಶಿಕ್ಷಕರಿಗೆ ಮಾತ್ರ ಸೀಮಿತವಾಗಿರಬಾರದು. ಆಡಳಿತ ವ್ಯವಸ್ಥೆಯೂ ಅಷ್ಟೇ ಉತ್ತರದಾಯಿತ್ವ ಹೊಂದಿರಬೇಕು. ಶಾಲೆಯಲ್ಲಿ ಶಿಕ್ಷಕರ ಕೊರತೆಯಿದ್ದರೆ ಅದನ್ನು ಶೀಘ್ರವಾಗಿ ಭರ್ತಿ ಮಾಡುವುದು, ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸುವುದು, ಪಾಠಪುಸ್ತಕಗಳು ಮತ್ತು ಕಲಿಕಾ ಸಾಮಗ್ರಿಗಳು ಸಮಯಕ್ಕೆ ತಲುಪುವಂತೆ ನೋಡಿಕೊಳ್ಳುವುದು, ಇವುಗಳೂ ಜವಾಬ್ದಾರಿಯ ಭಾಗವೇ ಆಗಿವೆ. ತಂತ್ರಜ್ಞಾನವು ಈ ಎರಡೂ ದಿಕ್ಕಿನಲ್ಲಿ ಕೆಲಸ ಮಾಡಿದಾಗ ಮಾತ್ರ ಅದು ನ್ಯಾಯಸಮ್ಮತವಾಗುತ್ತದೆ.

ನನ್ನ ದೃಷ್ಟಿಯಲ್ಲಿ ʼನಿರಂತರʼ ಮತ್ತು ʼಕರ್ತವ್ಯʼ ಆ್ಯಪ್‌ಗಳ ಯಶಸ್ಸನ್ನು ಅವು ಎಷ್ಟು ಹಾಜರಾತಿ ದಾಖಲಿಸಿವೆ ಎಂಬುದರಿಂದ ಅಳೆಯಬಾರದು. ಅವುಗಳ ಪರಿಣಾಮವಾಗಿ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಸುಧಾರಿಸಿತೇ, ಶಾಲೆಗಳ ಕಾರ್ಯಕ್ಷಮತೆ ಹೆಚ್ಚಾಯಿತೇ, ಪೋಷಕರ ವಿಶ್ವಾಸ ಬಲವಾಯಿತೇ ಮತ್ತು ಶಿಕ್ಷಕರಿಗೆ ಉತ್ತಮ ಆಡಳಿತಾತ್ಮಕ ಬೆಂಬಲ ದೊರಕಿತೇ ಎಂಬುದರ ಆಧಾರದ ಮೇಲೆ ಅವುಗಳನ್ನು ಮೌಲ್ಯಮಾಪನ ಮಾಡಬೇಕು.

ಶಿಕ್ಷಕರು ನಮ್ಮ ಶಿಕ್ಷಣ ವ್ಯವಸ್ಥೆಯ ಕೇಂದ್ರಬಿಂದು. ಅವರನ್ನು ಅನುಮಾನದಿಂದ ನೋಡುವುದಲ್ಲ, ಗೌರವದಿಂದ ಬೆಂಬಲಿಸುವುದು ಸರ್ಕಾರದ ಕರ್ತವ್ಯ. ಅದೇ ಸಮಯದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲೆ ಸಮಾಜ ಇಟ್ಟಿರುವ ವಿಶ್ವಾಸವನ್ನು ಕಾಪಾಡುವುದು ಕೂಡ ನಮ್ಮ ಹೊಣೆಗಾರಿಕೆ. ಈ ಎರಡರ ನಡುವೆ ಸಮತೋಲನ ಸಾಧಿಸುವುದೇ ಉತ್ತಮ ಆಡಳಿತದ ಲಕ್ಷಣ.

ತಂತ್ರಜ್ಞಾನ ಎಂದರೆ ಮಾನವೀಯತೆಯನ್ನು ಬದಲಿಸುವ ಸಾಧನವಲ್ಲ. ಅದು ಮಾನವೀಯತೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸುವ ಮಾರ್ಗವಾಗಬೇಕು. ಒಂದು ಆ್ಯಪ್, ಶಿಕ್ಷಕರನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಒಬ್ಬ ಶಿಕ್ಷಕರ ಸಮಯವನ್ನು ಉಳಿಸಿ, ಆಡಳಿತವನ್ನು ಸರಳಗೊಳಿಸಿ, ವಿದ್ಯಾರ್ಥಿಗಳಿಗೆ ಹೆಚ್ಚು ಸಮಯವನ್ನು ನೀಡಲು ಸಹಾಯ ಮಾಡಿದರೆ ಅದರ ಉದ್ದೇಶ ಸಾರ್ಥಕವಾಗುತ್ತದೆ.

ನಾನು ಯಾವಾಗಲೂ ಹೇಳೂವಂತೆ, ಶಿಕ್ಷಣದಲ್ಲಿ ಪ್ರತಿಯೊಂದು ನಿರ್ಧಾರವೂ ಮಕ್ಕಳ ಹಿತದೃಷ್ಟಿಯಿಂದಲೇ ಇರಬೇಕು. ಡಿಜಿಟಲ್ ಸಾಧನಗಳು ಮಕ್ಕಳ ಕಲಿಕೆಯನ್ನು ಬಲಪಡಿಸಿದರೆ, ಶಿಕ್ಷಕರ ಕೆಲಸವನ್ನು ಸುಲಭಗೊಳಿಸಿದರೆ ಮತ್ತು ಆಡಳಿತವನ್ನು ಹೆಚ್ಚು ಪಾರದರ್ಶಕಗೊಳಿಸಿದರೆ ಅವುಗಳನ್ನು ಸ್ವಾಗತಿಸಬೇಕು. ಆದರೆ ಅದೇ ಸಮಯದಲ್ಲಿ ಗೌಪ್ಯತೆ, ಮಾನವೀಯ ಗೌರವ ಮತ್ತು ವಿಶ್ವಾಸ ಎಂಬ ಮೌಲ್ಯಗಳನ್ನು ಎಂದಿಗೂ ಮರೆಯಬಾರದು. ಜವಾಬ್ದಾರಿತನ ಮತ್ತು ವಿಶ್ವಾಸ, ಈ ಎರಡೂ ಜೊತೆಯಾಗಿ ನಡೆದಾಗ ಮಾತ್ರ ಶಿಕ್ಷಣದಲ್ಲಿ ತಂತ್ರಜ್ಞಾನದ ನಿಜವಾದ ಯಶಸ್ಸು ಸಾಧ್ಯ.